Sunday, November 11, 2012

ಸ್ವಂತದ ಬದುಕಿನ ಬಿಡಿ ಚಿತ್ರಗಳು-೩





ಅವ್ವ ಈರವ್ವ, ಅಪ್ಪ ಈರಪ್ಪ: ನೆನಪಿನ ಮಾಲೆಯ ಕೊನೆಯ ಕಂತು    



ನಮ್ಮವ್ವನಿಗೆ ನಾನೇ ಒಂದು ಚಿಂತೆಯಾಗಿದ್ದೆ. ನಾನು ಏಳನೇ ಕ್ಲಾಸಿನಲ್ಲಿದ್ದಾಗ ನನಗೆ ಈಜು ಕಲಿಸಲು ನಿರ್ಧರಿಸಿ ನನ್ನ ತಂದೆ ಜೋಳದ ಅರವತ್ತು ಒಣ ದಂಟುಗಳನ್ನು ಸಮಾನ ಉದ್ದಕ್ಕೆ ತುಂಡರಿಸಿ ಅವುಗಳದೊಂದು ಪೆಂಡೀ ಮಾಡಿ ಹಗ್ಗ ಬಿಗಿದು ಮುಂಜಾನೆ ಈಜುವ ಬಾವಿಗೆ ಕರೆದೊಯ್ದು ಅದನ್ನು ನನ್ನ ಬೆನ್ನಿಗೆ ಕಟ್ಟಿ, ಹಿಡಿದು ಈಜಾಡಿಸತೊಡಗಿದರು. ಆ ಆಮೆ ವೇಗದ ಕಲಿಕೆಯಲ್ಲಿ ನಾನು ಆಸಕ್ತಿ ಕಳೆದುಕೊಂಡೆ. ಮುಂದೆ ನಾವು ಮೂವರು ಗೆಳೆಯರು ಮನೆಯವರಿಗೆ ಗೊತ್ತಾಗದಂತೆ ಬಾವಿಗೆ ಹೋಗಿ ಮೂಲೆಯ ಸೀಮಿತ ವ್ಯಾಪ್ತಿಯಲ್ಲಿ-ಮುಳುಗುವ ಪ್ರಸಂಗ ಬಂದರೆ ಗಬಕ್ಕನೇ ಮೆಟ್ಟಿಲ ಕಲ್ಲು ಹಿಡಿಯಲನುಕೂಲವಾಗುವಂತೆ- ಈಜು ಬೀಳುತ್ತ ನಾಲ್ಕೇ ದಿನದಲ್ಲಿ ಈಜು ಕಲಿತೆವು. ಹೈಯರ್ ಸೆಕಂಡರಿಯ ಮೂರು ವರ್ಷ ನಮ್ಮ ಈಜಿನ ಅವಧಿ ವಿಶೇಷವಾಗಿ ರಜೆಯ ದಿನಗಳಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಎಂಬಂತಾಯಿತು. ಹಾಗೆ ನೋಡಿದರೆ ನಾವು ನಮ್ಮದೇ ರಜಾ ದಿನಗಳನ್ನು ಸೃಷ್ಟಿಸಿಕೊಳ್ಳತೊಡಗಿದ್ದೆವು. ಮನೆಯವರ ತಿಳಿವಳಿಕೆಯಲ್ಲಿ ನಾವು ಮ್ಯುನಿಸಿಪಲ್ ಜಾಕ್ಸನ್ ಹೈಸ್ಕೂಲಿನ ನಂನಮ್ಮ ಕ್ಲಾಸ್ ರೂಮ್ ಗಳಲ್ಲಿರುತ್ತಿದ್ದೆವು. ಆದರೆ ನಾವು ವಾಸ್ತವವಾಗಿ ಬೆಲ್ಲದ್ ಅಥವಾ ಮೆಟಗುಡ್ ಅವರ ಕಬ್ಬಿನ ತೋಟಗಳ ಮಧ್ಯೆ ಇದ್ದ ಈಜುವ ಬಾವಿಗಳ ಜಲಚರಗಳಾಗಿ ಹೋಗಿದ್ದೆವು. ಯಾವಾಗಲಾದರೂ ಬಾವಿಯಲ್ಲಿ ಯಾರೋ ಮುಳುಗಿ ಹೆಣ ತೇಲಿದ್ದು ನೋಡಿದಾಗ ಭಯದಿಂದ ನಾಲ್ಕಾರು ದಿನ ಹೋಗುವದು ಬಿಡುತ್ತಿದ್ದೆವಷ್ಟೆ. ನನ್ನ ಅವ್ವನಿಗೆ ನಾನು ಗೊತ್ತು ಗುರಿ ಇಲ್ಲದೆ ಬೆಳೆಯುತ್ತಿದ್ದಂತೆನ್ನಿಸಿರಬೇಕು. ಅದಕ್ಕಿಂತ ನನ್ನ ಕಿಡಿಗೇಡಿತನ ಅತಿಯಾದುದಾಗಿತ್ತು. ನನ್ನ ಸಲುವಾಗಿ ಅವಳು ಹಲವು ಸಲ ಕಣ್ಣೀರಿಟ್ಟಳು. ನಾಲ್ಕಾರು ತಾಸು ನಾನು ಮನೆಗೆ ಬಾರದೇ ಹೋದರೆ ಕಳವಳ ಪಟ್ಟು ಸುತ್ತಲಿನ ಓಣಿ ಬೀದಿಗಳಲ್ಲಿ ಅವರಿವರನ್ನು ಕೇಳುತ್ತ ಹುಡುಕುತ್ತ ಹೋಗುತ್ತಿದ್ದಳು. ಅತಿಯಾದ ಕೋಪ ಬಂದಾಗ ಹೊಡೆಯುತ್ತಿದ್ದಳಾದರೂ ಅದರಿಂದ ಅವಳಿಗೇ ನೋವಾಗುತ್ತಿತ್ತು ಅಥವಾ ಮೇಲೇರಿಸಿದ ಬಳೆ ಹೊಡೆಯುವ ಭರದಲ್ಲಿ ಮುಂಗೈಗಿಳಿದು ಒಡೆದು ಅವಳ ಕೈ ರಕ್ತವೇ ಜಿನುಗುತ್ತಿತ್ತು. ನಾನು ನಗುತ್ತಿದ್ದೆ. ಅದು ಅವಳಿಗೆ ಇನ್ನಷ್ಟು ಕಿರಿಕಿರಿಯಾಗುತ್ತಿತ್ತು. ಸೋತು ಕೈಚೆಲ್ಲಿ ಕೊನೆಗೆ ಅವಳು "ಈವೊತ್ತ್ ಅವರ ಮಿಲ್ಲಿನಿಂದ ಮನೀಗಿ ಬರ್ಲಿ ನಿಂದ್ರ್, ನಿಂದೆಲ್ಲಾ ಹೇಳ್ತೇನ. ಇಕೇನ್ ಹೇಳ್ತಾಳ್ ಬಿಡ ಅಂತ ತಿಳ್ಕೊಂಡೀಯೇನ್ ನೀ ಎಲ್ಲ್ಯೋ,ಇವೊತ್ತ್ ನಿಂದೆಲ್ಲಾ ಹೇಳದಿದ್ದರ ನಮ್ಮಪ್ಪನ ಮಗಳs ಅಲ್ಲ ನಾ" ಎಂದೆಲ್ಲ ತಾನೇ ಆಣೆ-ಪ್ರಮಾಣ ಹಾಕಿಕೊಂಡು ತನ್ನ ನಿರ್ಧಾರದ ದೃಢತೆಯನ್ನು ಬಿಂಬಿಸಿ ಹೆದರಿಸುತ್ತಿದ್ದಳು. ಹಾಗೆ ಅವಳು ನನ್ನ ತಂದೆಯ ಮುಂದೆ ಹೇಳಿದಾಗ ನನಗೆ ಉಗ್ರ ಶಿಕ್ಷೆಯಾಗುತ್ತಿತ್ತೆಂದು ಯಾರೂ ಭಾವಿಸಬೇಕಿಲ್ಲ. ಅವಳು ಹೇಳುವದನ್ನೆಲ್ಲಾ ಕೇಳಿಯಾದ ಮೇಲೆ ನಮ್ಮ ತಂದೆ "ಹಂಗೆಲ್ಲಾ ಮಾಡಬಾರದೋ,ಶಾಣ್ಯಾ ಆಗಬೇಕಪಾ" ಎನ್ನುತ್ತಿದ್ದರು ಅಷ್ಟೇ. ಅವರು ಮಕ್ಕಳನ್ನು ಹೊಡೆದದ್ದಾಗಲಿ "ಎಲಾ ಲಫಂಗಾ" ಎಂಬುದಕ್ಕಿಂತ ಉಗ್ರವಾಗಿ ಬೈದದ್ದಾಗಲಿ ನನಗೆ ಗೊತ್ತೇ ಇಲ್ಲ.
ಎಸ್ಸೆಸ್ಸೆಲ್ಸಿಯಲ್ಲಿ ನಾನು ಫೇಲಾದೆ. ಗಣಿತದಲ್ಲಿ ಫೇಲಾಗುವೆನೆಂದುಕೊಂಡಿದ್ದೆ. ಆದರೆ ಸೈನ್ಸ್ ನಲ್ಲಿ ಫೇಲಾಗಿದ್ದೆ. ಹೀಗಾಗಿ ಸಮಾಧಾನವೇ ಆಗಿತ್ತು. ಮುಂದೆ ಅಕ್ಟೋಬರ್ ಪೂರಕ ಪರೀಕ್ಷೆಯ ಫಲಿತಾಂಶ ಹೊರಬರಲಿದ್ದ ದಿನ ಅಪ್ಪ ಹೇಳಿದರು: "ಪಾಸಾಗಲಿ ನಪಾಸಾಗಲಿ, ರಿಸಲ್ಟ್ ನೋಡಿಕೊಂಡ ಸೀದಾ ಮನಿಗೇ ಬಾ". ಆ ಮೇಲೆ ನನ್ನ ಪ್ರಥಮ ಪಿಯುಸಿ ಫಲಿತಾಂಶ ಸೆಕೆಂಡ್ ಕ್ಲಾಸ್ ಆಗಿತ್ತು. ಹಾಗಂತ ನಮ್ಮ ತಂದೆಗೆ ಹೇಳಿದಾಗ "ಒಟ್ ಪಾಸಾತಿಲ್ಲೋ" ಎಂದಿದ್ದರವರು! ನಮ್ಮ ತಾಯಿಗೂ ಮಗ "ಹಾದಿಗೆ ಹತ್ತಿದನಲ್ಲ" ಎಂದು ಸಮಾಧಾನವಾಗಿತ್ತು. ಆ ನಡುವೆ ನಾನೊಮ್ಮೆ ಧಾರವಾಡಕ್ಕೆ ಬಂದು ಮುರುಘಾಮಠದ ಹತ್ತಿರವಿದ್ದ ನಮ್ಮ ಒಬ್ಬ ಅಕ್ಕನ ಮನೆಯಲ್ಲಿ ತಿಂಗಳೊಪ್ಪತ್ತು ಇದ್ದು ಹೋಗಿದ್ದೆನಾಗಿ ನಮ್ಮವ್ವನ ತರ್ಕದಲ್ಲಿ ಮುರುಘಾಮಠದ ಅಪ್ಪಗಳ ಕೃಪೆಯಿಂದ ನಾನು ಬದಲಾಗಿದ್ದೆ. ಅವಳ ನಂಬುಗೆಯಲ್ಲಿ ತಥ್ಯವಿರಲಿಲ್ಲ. ಆದರೆ ಹಾಗೆ ನಂಬಿ ಆಕೆ ಪಟ್ಟುಕೊಳ್ಳುತ್ತಿದ್ದ ಸಮಾಧಾನದಿಂದ ಅವಳನ್ನು ಎರವಾಗಿಸುವ ಅಗತ್ಯ ನನಗೂ ಕಾಣಲಿಲ್ಲ.
ಒಮ್ಮೊಮ್ಮೆ ನಮ್ಮವ್ವನ ತರ್ಕಗಳು ಅಸಂಗತವೆನಿಸುವಷ್ಟು ತಮಾಷೆಯಾಗಿರುತ್ತಿದ್ದವು. ಒಂದು ಸಲ ಅವಳಿಗೊಂದು ಎಮ್ಮೆ ಸಾಕುವ ಯೋಚನೆ ಬಂತು. ಮನೆಯಲ್ಲಿ ಯಾರಿಗೂ ಆ ಕುರಿತು ಉತ್ಸಾಹವಿರಲಿಲ್ಲ. ಸಹಾನುಭೂತಿಯಂತೂ ಮೊದಲೇ ಇರಲಿಲ್ಲ. ಎಲ್ಲ ವಾದಗಳನ್ನೂ ಹೂಡಿದಳು. ಯಾವುದೂ ಫಲಿಸಲಿಲ್ಲ. ಅಂತಿಮವಾಗಿ ಆಕೆ ಹೇಳಿದ್ದು: "ಹಿತ್ತಲದಾಗ ಒಂದ್ ಚೀಲ ತೌಡ ಕೂಡಿ ಬಿದ್ದೈತಿ, ಒಂದ್ ಎಮ್ಮಿ ಸಾಕಿದರ ಉಪೇಗ ಆಕ್ಕೈತಿಲ್ಲೋ ನೀವs ಹೇಳ್ರಿ.." ಒಂದು ಚೀಲ ಹೊಟ್ಟು ಸಂಗ್ರಹವಾಗಿ ಮನೆಯಲ್ಲಿದೆ ಮತ್ತು ಅದು ಪ್ರಯೋಜನಕ್ಕೆ ಬರಲಿ ಎಂಬುದಕ್ಕೆ ಎಮ್ಮೆ ಸಾಕಬೇಕೆನ್ನುವ ಅವಳ ವಾದಕ್ಕೆ ನಾವು ಮನಸಾರೆ ನಕ್ಕೆವು. ತಾನೂ ನಕ್ಕಳು. ನಮ್ಮವ್ವನ ನಗೆ ತುಂಬ ಚೆಂದ. ಅವಳ ಯೋಜನೆಗೆ ಪ್ರಮುಖವಾಗಿ ಕಲ್ಲು ಹಾಕುವವ ನಾನೇ ಆದ್ದರಿಂದ ಆಕೆ ಆ ಎಮ್ಮೆಯ ಹಾಲು ಕುಡಿದು ನಾನು ಸ್ವಲ್ಪ ಮೈ ಹಚ್ಚಬಹುದೆಂದು ಹೇಳಿ ನನ್ನನ್ನೇ ಪುಸಲಾಯಿಸಿದಳು. ಆ ಎಮ್ಮೆ ಈದು ಹಾಲು ಕೊಡತೊಡಗಿದ ಹೊತ್ತಿಗೆ ನಾನು ಧಾರವಾಡಕ್ಕೆ ಓದಲು ಹೋದ ಕಾರಣ ವಾಸ್ತವವಾಗಿ ಆಗಲೇ ಸಾಕಷ್ಟು ಮೈ ಹಚ್ಚಿದ್ದ ನನ್ನ ತಮ್ಮ ಆ ಹಾಲಿನ ಫಲಾನುಭವಿಯಾದ.
೧೯೭೫ರಲ್ಲಿ ಪದವಿ ವ್ಯಾಸಂಗಕ್ಕಾಗಿ ಧಾರವಾಡಕ್ಕೆ ಹೋಗುವದಾಗಿ ನಾನು ಹಟ ಹಿಡಿದೆ. ಅದು ನನ್ನ ತಂದೆಗೆ ಸಮಸ್ಯೆಯಾಯಿತು. ಆದರೆ ನನ್ನ ಹಟವೂ ದೃಢವಾದುದಾಗಿತ್ತು. ಅದಕ್ಕೆ ಕಾರಣವೂ ಇತ್ತು. ದ್ವಿತೀಯ ಪಿಯುಸಿ ಯಲ್ಲಿದ್ದಾಗ ಒಮ್ಮೆ ಶುಲ್ಕದಿಂದ ವಿನಾಯ್ತಿ ಕೇಳಲೆಂದು ಪ್ರಾಚಾರ್ಯರನ್ನು ಭೇಟಿಯಾಗಿದ್ದೆ. ವಿಜಾಪುರ ಮೂಲದ, ಗೌರವರ್ಣದ, ಎಳೆಬಿಸಿಲಿನಲ್ಲಿ ವಿಜಯ ಸೋಸಿಯಲ್ ಕ್ಲಬ್ ನ ಲಾನ್ ನಲ್ಲಿ ಬೆವೆಯುತ್ತ ಟೆನ್ನಿಸ್ ಆಡುತ್ತಿದ್ದ ಎತ್ತರದ ವ್ಯಕ್ತಿ ಎನ್.ಜಿ.ಬಿರಾದಾರ್ ಪಾಟೀಲ್ ಸ್ಟ್ರಿಕ್ಟ್ ಪ್ರಿನ್ಸಿಪಾಲ್ ಎಂದು ಖ್ಯಾತಿ ಪಡೆದಿದ್ದರು. "ಆಯ್ತು ಕೊಡೋಣ, ನಿನ್ನ ತಂದೆಯವರನ್ನು ಕರೆದುಕೊಂಡು ಬಾ" ಎಂದರು. ನಾನು ಮನೆಗೆ ಬಂದಾಗ ಊಟಕ್ಕೆ ಕುಳಿತಿದ್ದ ನನ್ನ ತಂದೆ ಊಟವನ್ನು ಅರ್ಧಕ್ಕೇ ನಿಲ್ಲಿಸಿ ಕೈ ತೊಳೆದು ನನ್ನೊಂದಿಗೆ ಕಾಲೇಜಿಗೆ ಬಂದರು. ನನ್ನ ತಂದೆಯನ್ನು ಮುಂದೆ ಕೂಡ್ರಿಸಿಕೊಂಡು " ನಿಮ್ ಮಗಾ ಮಿಸ್ ಚೀವ್ಹಸ್ ಅದಾನ. ಇಂಥವ್ರಿಗೆ ರಿಯಾಯ್ತಿ ಕೊಡಲಾಗುವದಿಲ್ಲ" ಎಂದು ಪ್ರಿನ್ಸಿಪಾಲರು ಹೇಳಿದ್ದು ಕೇಳಿ ನಾನು ಅಪ್ರತಿಭನಾದೆ. ಅದರಲ್ಲಿ ಸತ್ಯದ ಒಂದಂಶವೂ ಇರಲಿಲ್ಲ. ಹಾಗಂತ ಅವರಿಗೆ ಹೇಳಿದೆ. ನನ್ನ ಸಮಸ್ಯೆ ಆ ಪ್ರಿನ್ಸಿಪಾಲ್ ಗೆ ನನ್ನ ಒಳ್ಳೇತನ ನಿರೂಪಿಸುವದಾಗಿರಲಿಲ್ಲ. ಆ ಶತಪ್ರತಿಶತ ಮಿಥ್ಯಾರೋಪವನ್ನು ನನ್ನ ತಂದೆಯ ಸಮ್ಮುಖದಲ್ಲಿ ಹೊರಿಸಲಾಗಿತ್ತು. ಅದರಿಂದ ನನ್ನ ತಂದೆಗಾದ ನೋವನ್ನು ಹೇಗೆ ತೊಡೆದುಹಾಕುವದು? ನಿರುಪಾಯವಾಗಿ ಮನೆಗೆ ಮರಳಿದೆವು. ನನ್ನ ತಂದೆ ಒಂದೇ ಒಂದು ಮಾತು ಹೇಳಲಿಲ್ಲ, ದೂಷಿಸಲಿಲ್ಲ. ಆಮೇಲೆ ತಿಳಿದು ಬಂದಂತೆ ಎನ್.ಸಿ.ಸಿ ಕೆಡೆಟ್ ಗಳ ಗುಂಪಿನಲ್ಲೊಬ್ಬ ವಿದ್ಯಾರ್ಥಿ ಏನೋ ಉಲಕೋಚಿತನ ಮಾಡಿದ್ದು ಅವನೇ ನಾನೆಂದು ಪ್ರಿನ್ಸಿಪಾಲ್ ಮಹಾಶಯರು ಭಾವಿಸಿದ್ದರು. ಹಾಗೆಂದು ನನಗೆ ಹೇಳಲಾಯಿತು. ಆದರೆ ಪಿಯುಸಿ ಮುಗಿದ ಮೇಲೆ ಈ ಕಾಲೇಜಿನ ಋಣವೂ ಮುಗಿಯಿತೆಂದು ನಾನು ನಿರ್ಧರಿಸಿಯಾಗಿತ್ತು. ತಿಂಗಳೊಪ್ಪತ್ತಿನಲ್ಲಿ ಪರೀಕ್ಷೆ ಮುಗಿದು ಫಲಿತಾಂಶವೂ ಬಂದು ನಾನು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದೆ. ಆಯಾಯ ವರ್ಗಗಳಲ್ಲಿ ಅತ್ಯುನ್ನತ ಅಂಕ ಗಳಿಸಿದ್ದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಚಿಕ್ಕ ಕಾರ್ಯಕ್ರಮವೊಂದು ಪ್ರಿನ್ಸಿಪಾಲ್ ರ ಛೇಂಬರ್ ನಲ್ಲಿ ಏರ್ಪಾಡಾಗಿತ್ತು. ಅಲ್ಲಿ ನನ್ನನ್ನು ಕಂಡು ಪ್ರಿನ್ಸಿಪಾಲರಿಗೆ ಆಶ್ಚರ್ಯವೇ ಆಯಿತು.ನಾನು ಅಲ್ಲಿಯೇ ಪದವಿ ವ್ಯಾಸಂಗ ಮುಂದುವರಿಸುವೆನೆಂಬ ಗ್ರಹಿಕೆಯಲ್ಲಿ ಮಾತಾಡಿದ ಪ್ರಾಚಾರ್ಯರಿಗೆ ನಾನು ಅಲ್ಲಿ ಕಲಿಯುವದಿಲ್ಲವೆಂದೆ. ಅವರು ಕಾರಣ ಕೇಳಿದಾಗ ಅಲ್ಲಿ ಇತಿಹಾಸವನ್ನು ಪ್ರಧಾನ ವಿಷಯವಾಗಿ ಆಯ್ದುಕೊಳ್ಳುವ ಅವಕಾಶವಿಲ್ಲದ್ದರಿಂದ ನಾನು ಧಾರವಾಡಕ್ಕೆ ಹೋಗುವೆ  ಎಂದೆ.(ಮುಂದೆ ನಾನು ಎಂ.ಎ ಓದುತ್ತಿದ್ದಾಗ ಕಾಲೇಜಿನ ಕೆಲಸಗಳಿಗೆಂದು ಅವರು ವಿಶ್ವವಿದ್ಯಾಲಯಕ್ಕೆ ಬಂದಾಗ ನನ್ನನ್ನು ಕಂಡರೆ ನಿಂತು ಮಾತಾಡಿಸಿ ಹೋಗುತ್ತಿದ್ದರು. ಆದರೆ ಆ ಪ್ರಕರಣದ ಬಗ್ಗೆ ನನ್ನ ಮನಸಿನಲ್ಲಿ ಬಹುದಿನಗಳ ವರೆಗೆ ಒಂದು ವಿಷಾದ ಉಳಿದುಕೊಂಡಿತ್ತು.)
ನಾನು ಧಾರವಾಡಕ್ಕೆ ಹೋಗುವದು ನನ್ನ ತಂದೆಗೆ ಸಮ್ಮತವಿರಲಿಲ್ಲ. ಅದಕ್ಕೆ ಪ್ರಮುಖ ಕಾರಣ ಆರ್ಥಿಕವಾದುದಾಗಿತ್ತು. ಈ ನಡುವೆ ನನ್ನಣ್ಣ ಧಾರವಾಡ ಕೃಷಿ ಕಾಲೇಜಿನಲ್ಲಿ ಎಂ.ಎಸ್ಸಿ ಮುಗಿಸಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕನೆಂದು ನಿಯುಕ್ತನಾಗಿದ್ದರೂ ಆತನ ವಿವಾಹವಾಗಿದ್ದು ಮನೆ ಹೂಡಿದ್ದರಿಂದ ತನ್ನ ಕುಟುಂಬದ ಖರ್ಚು ವೆಚ್ಚಗಳಿಗೆ ಅವನ ವೇತನ ವಿನಿಯೋಗವಾಗಿ ಅವನಿಂದ ನಮಗೆ ವಿಶೇಷ ಧನಸಹಾಯವೇನೂ ಇರಲಿಲ್ಲ. ಈ ಸ್ಥಿತಿ ನನಗೂ ಗೊತ್ತಿತ್ತು. ಕೊನೆಗೆ ಪೋಲೀಸ್ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದ ಅಣ್ಣಿಗೇರಿ ಎಂಬುವವರೊಂದಿಗೆ ವಿವಾಹವಾಗಿ ಧಾರವಾಡದಲ್ಲಿದ್ದ ನನ್ನ ಕಿರಿಯ ಅಕ್ಕ ಪ್ರಭಾವತಿಯ ಮನೆಯಲ್ಲಿದ್ದುಕೊಂಡು ನಾನು ಓದುವದೆಂದಾಯಿತು. ಪ್ರತಿ ತಿಂಗಳು ತಾವು ೫೦ ರೂಪಾಯಿ ಕಳಿಸುವದಾಗಿಯೂ ಅದರಲ್ಲಿ ೧೦ ರೂಪಾಯಿ ನಾನಿಟ್ಟುಕೊಂಡು ೪೦ ರೂಪಾಯಿಗಳನ್ನು ನನ್ನಕ್ಕನಿಗೆ ಕೊಡಬೇಕೆಂದೂ ಹೇಳಿ ನನ್ನ ತಂದೆ ಸಮ್ಮತಿಸಿದರು. ಕರ್ನಾಟಕ ಕಾಲೇಜಿಗೆ ಪ್ರವೇಶವೇನೋ ದೊರೆಯಿತು. ಆರಂಭಿಕ ಶುಲ್ಕ ಸಂದಾಯ ಮಾಡಲು ಹಣ ಬೇಕಿತ್ತು. ಊರಿಗೆ ಹೋದೆ. ನನ್ನ ತಾಯಿ ತನ್ನ ಕೊರಳಲ್ಲಿದ್ದ ಗುಂಡಿನ ಸರ ತೆಗೆದು ಹಿರಿಯಕ್ಕನ ಕೈಲಿಟ್ಟಳು. ಮಟಮಟ ಮಧ್ಯಾಹ್ನ ನಾನೂ ಗೌರಕ್ಕನೂ ಹೋಗಿ ಲೇವಾದೇವಿ ಮಾಡುತ್ತಿದ್ದ ವಕೀಲನೊಬ್ಬನ ಬಳಿ ಅದನ್ನು ಒತ್ತೆ ಇಟ್ಟು ಹಣ ತೆಗೆದುಕೊಂಡು ಬಂದೆವು. ನಾನು ಧಾರವಾಡಕ್ಕೆ ಬಂದು ಕಾಲೇಜಿಗೆ ಪ್ರವೇಶ ಪಡೆದೆ.
ಪ್ರಿನ್ಸಿಪಾಲರು ಹೊರಿಸಿದ ಮಿಥ್ಯಾಪವಾದ ನಾನು ಬೈಲಹೊಂಗಲ ತೊರೆಯಲು ತತ್ ಕ್ಷಣದ ಕಾರಣವಾಗಿದ್ದ ಹೊರತಾಗಿಯೂ ಇತಿಹಾಸವನ್ನು ಓದಬೇಕೆಂಬ ಆಶೆ ನನಗಿತ್ತು. ಅದಕ್ಕೆ ವಿಶೇಷವಾಗಿ ನನ್ನ ತಂದೆಯೇ ಕಾರಣ. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದ ನನ್ನ ತಂದೆ ಆ ಕಾಲಘಟ್ಟದ ರಾಜಕೀಯ ವಿದ್ಯಮಾನಗಳಲ್ಲಿ ಆಳದ ಆಸಕ್ತಿಯನ್ನಿಟ್ಟುಕೊಂಡವರು. ನನಗೆ ದ್ವಿತೀಯ ಮಹಾಯುದ್ಧದ ಕುರಿತು ಹೇಳುತ್ತಿದ್ದರು. ಗಾಂಧಿ,ನೆಹರೂ,ಜಿನ್ನಾ,ಹಿಟ್ಲರ್,ಸ್ಟಾಲಿನ್,ಮಹಾಜನ್ ಆಯೋಗ,ಇಂದಿರಾ ಗಾಂಧಿ, ಮೊರಾರ್ಜಿ, ವೈ.ಬಿ.ಚವಾಣ್...!! ತಂದೆಯಂತಿರದೇ ಸ್ನೇಹಿತನಂತಿದ್ದ ಅವರು ಇಂಥ ವಿಷಯಗಳ ಕುರಿತು ಆಗಾಗ ಮಾತನಾಡುತ್ತಿದ್ದರು.
ನನ್ನ ಅವ್ವ ತುಂಬ ಕಳವಳ ಪಟ್ಟದ್ದು ನಾನು ಎಂ.ಎ ಮುಗಿಸಿ ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಕಾಲೇಜಿನಲ್ಲಿ ಒಂದು ವರ್ಷ ಅರೆಕಾಲಿಕ ಉಪನ್ಯಾಸಕನಾಗಿದ್ದು ಅದೂ ಬೇಸರವಾಗಿ ೧೯೮೧ ರಲ್ಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಓದಲೆಂದು ದೆಹಲಿಗೆ ಹೊರಟು ನಿಂತಾಗ. ಅವಳು ಅತ್ತಳು,ಕರೆದಳು,ದಿಲ್ಲಿಗೆ ಹೋಗಬೇಡವೆಂದು ಹಲುಬಿದಳು. ಕೊನೆಗೆ "ಇನ್ ನಿನ ಮದಿವೀ ಸುದ್ದೀ ತಗ್ಯೂದುಲ್ಲ ಬಿಡೋ, ನೀ ದಿಲ್ಲೀಗಿ ಹೋಗಬ್ಯಾಡಾ" ಎಂದಳು! (ನನ್ನ ಎಂ.ಎ ಮುಗಿಯುತ್ತಲೇ ನನ್ನ ಮದುವೆಯ ಪ್ರಸ್ತಾಪಮಾಡತೊಡಗಿದ್ದ ಅವಳಿಗೆ "ನೀ ಹಿಂಗೆಲ್ಲಾ ಗಂಟ್ ಬಿದ್ರ ದಿಲ್ಲೀಗೆರs,ಮುಂಬೈಗೆರs ಹೋಗಿಬಿಡ್ತೇನ್ ನೋಡ" ಎಂದು ನಾನು ಹೆದರಿಸುತ್ತಿದ್ದೆ. ನಾನು ದಿಲ್ಲಿಗೆ ಹೋಗುವದು ನಿಜವೇ ಎಂದಾದಾಗ ಅದು ಆ ಕಾರಣಕ್ಕೆ ಎಂದು ಅವಳು ಭಾವಿಸಿದ್ದಳು!)."ಅದಕ್ಕಲ್ಲಬೇ, ಅಲ್ಲಿ ಸ್ಕಾಲರ್ ಶಿಪ್ ಸಿಕ್ಕರ ಒಂದ್ ನಾಲ್ಕೈದ್ ವರ್ಷ ಇದ್ದ ಬರ್ತೇನ್ ಬಿಡಲಾ" ಎಂದೆ. ಅಲ್ಲಿ ಸ್ಕಾಲರ್ ಶಿಪ್ ಎಷ್ಟು ಕೊಡುತ್ತಾರೆಂದು ಅವಳು ಕೇಳಿದಾಗ "ತಿಂಗಳಿಗೆ ನಾಲ್ಕೈದು ನೂರು ರೂಪಾಯಿ" ಎಂದೆ. " ಅಷ್ಟ್ ರೊಕ್ಕಾ ನಾನs ಕೊಡ್ತೇನ್ ತಗೋ. ಮನ್ಯಾಗs ಕಿರಾಣಿ ಅಂಗಡೈತಿ. ಯಾಪಾರ ಮಾಡಿಕೊಂಡ್ ಸುಮ್ನ ನಮ್ಮ ಕಣ್ಮುಂದs ಇರೋ ಯಪ್ಪಾ" ಎಂದಳು. ಸ್ವರ್ಣಪದಕ ಸಮೇತ ಎಂ.ಎ ಮುಗಿಸಿ,ಪ್ರತಿಷ್ಠಿತ ಕಾಲೇಜೊಂದರಲ್ಲಿ ಒಂದು ವರ್ಷ ಪಾಠ ಮಾಡಿದ್ದ ನಾನು ಕಿರಾಣಿ ಸಾಮಾನು ಕಟ್ಟಿಕೊಡುತ್ತ ವ್ಯಾಪಾರ ಮಾಡುವ ಚಿತ್ರ ಕಲ್ಪಿಸಿಕೊಂಡು ನಕ್ಕೆ. ಆದರೆ "ಹಾಲ ಮಾರಿದ್ದರಾಗ ಇಷ್ಟ್ ಉಳೀತಾವ, ಶೇಂಗಾ ಸುಗ್ಗ್ಯಾಗಂತೂ ಚಿಂತೇ ಇಲ್ಲ.." ಎನ್ನುತ್ತ ಆ ಐದುನೂರು ರೂಪಾಯಿ ತಾನು ಹೇಗೆ ಜಮೆ ಮಾಡಬಲ್ಲಳೆಂದು ನನ್ನ ಅವ್ವ ಗಂಭೀರವಾಗಿ ವಿವರಿಸತೊಡಗಿದಾಗ ನನ್ನ ಕಣ್ಣು ತುಂಬಿ ಬಂದಿದ್ದವು. ಕೊನೆಗೆ "ವಾರಾ ವಾರಾ ತಪ್ಪದs ಪತ್ರಾ ಬರಕೊಂತ ಇರ"ಬೇಕೆನ್ನುವ ಅವಳ ಕರಾರಿಗೆ ಒಪ್ಪಿ ನಾನು ದಿಲ್ಲಿಗೆ ಹೊರಟೇಹೋದೆ. ಬದುಕಿನಲ್ಲಿ ನಾನು ನಿಯಮಿತವಾಗಿ ಐದು ವರ್ಷ ಪತ್ರ ಬರೆದ ಒಂದೇ ಅವಧಿ ಅದು. ಈ ಮಧ್ಯೆ ನನ್ನ ತಮ್ಮನೂ ಡೆಲ್ಲಿ ಸ್ಕೂಲ್ ಆಫ್ ಇಕನಾಮಿಕ್ಸ್ ನ ಭಾಗವಾಗಿದ್ದ ಸಮಾಜಶಾಸ್ತ್ರ ಅಧ್ಯಯನ ಕೇಂದ್ರದಲ್ಲಿ ಓದಲೆಂದು ದೆಹಲಿಗೆ ಬಂದು ನನ್ನೊಂದಿಗೇ ವಾಸಿಸತೊಡಗಿದ. ದಿಲ್ಲಿ ಎಂದರೆ ತನ್ನ ಇಬ್ಬರು ಗಂಡು ಮಕ್ಕಳು ಎಂದು ಸಮೀಕರಿಸಿದ್ದ ನನ್ನ ತಾಯಿ ೧೯೮೪ರಲ್ಲಿ ಇಂದಿರಾ ಗಾಂಧಿ ಹತ್ಯೆಯ ನಂತರ ದಿಲ್ಲಿಯಲ್ಲಿ ಭುಗಿಲೆದ್ದ ವ್ಯಾಪಕ ಹಿಂಸಾಚಾರದ ವರದಿಗಳನ್ನು ಕೇಳಿ ಬೆಂಕಿಯ ಮೇಲೆ ನಿಂತಂತೆ ಚಡಪಡಿಸಿದ್ದಳು.
ಈ ಎಲ್ಲ ಬೆಳವಣಿಗೆಗಳ ನಡುವೆ ನನ್ನ ತಂದೆ ಸ್ಥಿತಪ್ರಜ್ಞ. ಇದು ಶಬ್ದದ ಚೆಲುವಿಕೆಗಾಗಿ ಹೇಳುತ್ತಿರುವ ಮಾತಲ್ಲ. ಭಗವದ್ಗೀತೆಯನ್ನು ಆಳವಾಗಿ ಅಭ್ಯಸಿಸಿದವರಿದ್ದಾರೆ. ಅದರ ಕುರಿತು ಭಾಷಣ ಬಿಗಿಯುವವರಿದ್ದಾರೆ. ಆದರೆ ನನ್ನಪ್ಪ ಭಗವದ್ಗೀತೆಯನ್ನು ಬದುಕಿದರು. ಅದರ ಸಂದೇಶ ಅವರ ಜೀವನದ ತತ್ವವಾಗಿತ್ತು. ನಾಗರೀಲಿಪಿಯ ಸಂಸ್ಕೃತ ಪಠ್ಯದಲ್ಲಿ ನನ್ನ ತಂದೆ ಅದನ್ನು ತನ್ಮಯರಾಗಿ ಓದುತಿದ್ದರು. ಫಲಾಪೇಕ್ಷೆಗಳಿಲ್ಲದ ಕರ್ತವ್ಯವಾಗಿ ಮಾಡುವ ಕರ್ಮದ ಕುರಿತಾದ ಅದರ ಸಂದೇಶ ನನ್ನ ತಂದೆಯ ಅತ್ಯಂತ ಶ್ರದ್ಧೆಯ-ಪ್ರೀತಿಯ ಭಾಗವಾಗಿತ್ತು. ಟಿಳಕರ ಗೀತಾರಹಸ್ಯ ಎಂಬ ಮರಾಠಿ ಕೃತಿಯನ್ನೊಳಗೊಂಡು ಭಗವದ್ಗೀತೆಯನ್ನು ಅರ್ಥೈಸುವ ಹಲವು ಪುಸ್ತಕಗಳು ನಮ್ಮ ಮನೆಯಲ್ಲಿದ್ದವು. ತನ್ನೊಬ್ಬ ಮೊಮ್ಮಗಳಿಗೆ ನನ್ನ ತಂದೆ ಗೀತಾ ಎಂದು ಹೆಸರಿಟ್ಟರು. "ಅಲ್ಲಪಾ ಕೃಷ್ಣಾ, ಯುದ್ಧಾ ಮಾಡೂ ಅಂತೀ, ಎದುರಿಗಿ ನಿಂತವರರs ಯಾರು? ನನಗ ವಿದ್ಯಾ ಕಲಿಸಿದ ಗುರು,ನನ್ ಅಪ್ಪಗ ಒಡಹುಟ್ಟಿದವನ ಮಕ್ಕಳು,..ಇಂಥಾ ಯುದ್ಧ ಪಾಪ ಅಲ್ಲೇನೂ?" ಅಂತ ಅರ್ಜುನ ಕೇಳಿದಾಗ ಕೃಷ್ಣ ಹೇಳ್ತಾನ, "ಇದು ಕರ್ತವ್ಯದ ಪ್ರಶ್ನೆ, ನೀ ಈಗ ಸ್ಥಿತಪ್ರಜ್ಞ ಆಗಬೇಕು." "ಹಂಗಾರ ಸ್ಥಿತಪ್ರಜ್ಞ ಅಂದರ ಯಾರು? ಅವನ ಲಕ್ಷಣ ಏನು?" ಅಂತ ಅರ್ಜುನ ಕೇಳಿದಾಗ ಕೃಷ್ಣ ಹೇಳತಾನ,"ಸುಖೇದು:ಖೇ ಸಮೇಕೃತ್ವಾ ಲಾಭಾಲಾಭೌ ಜಯಾಜಯೌ..." ಹೀಗೇ ಸಾಗುತ್ತಿತ್ತು  ನನ್ನ ತಂದೆಯ ಮಾತು. ನನ್ನನ್ನು ಮುಂದೆ ಕೂಡ್ರಿಸಿಕೊಂಡು ಇದನ್ನೆಲ್ಲ ಎಷ್ಟು ಸಲ ಹೇಳಿದರೂ ನನ್ನ ತಂದೆಗೆ ಬೇಸರವಿರಲಿಲ್ಲ. ಕೇಳಿ ಕೇಳಿ ನನಗೇ ಬಾಯಿಪಾಠವಾಗಿ ಹೋಗಿತ್ತು.
ನನ್ನಪ್ಪ ಎಂಥ ಸ್ಥಿತಪ್ರಜ್ಞನೆಂಬುದನ್ನು ಕಾಣುವ ಸಂದರ್ಭವೂ ಬಂದಿತ್ತು. ೧೯೭೯ರ ಮೇ ತಿಂಗಳಾಂತ್ಯದ ಒಂದು ದಿನ ನನ್ನ ಗೆಳೆಯ ರವಿ ಬೆಳಗೆರೆಯ ಮದುವೆಗೆಂದು ಬಳ್ಳಾರಿಗೆ ಹೋಗಲು ನಾನು ಸಿದ್ಧನಾಗುತ್ತಿದ್ದಾಗ ಧಾವಿಸಿ ಬಂದ ನನ್ನ ಸೋದರಳಿಯ ಒಂದು ದಾರುಣ ವಾರ್ತೆ ತಂದಿದ್ದ. ಈ ಮಧ್ಯೆ ಬೆಂಗಳೂರಿನಿಂದ ಧಾರವಾಡದ ಕೃಷಿ ಕಾಲೇಜಿಗೆ ಅಧ್ಯಾಪಕನಾಗಿ ಬಂದು ಸಾರಸ್ವತಪುರದ ತನ್ನ ಮಾವನ (ಹೆಂಡತಿಯ ತಂದೆಯ) ಮನೆಯಲ್ಲಿ ನೆಲೆಸಿದ್ದ ನನ್ನ ಅಣ್ಣ ತನ್ನ ಅಧ್ಯಯನ ವಿಭಾಗದಲ್ಲಿ ತಾನು ಅನುಭವಿಸುತ್ತಿದ್ದ ಉಪೇಕ್ಷೆ ಮತ್ತು ತಾರತಮ್ಯಗಳಿಂದ ನೊಂದು ಅಂತರ್ಮುಖಿಯಾಗಿ ಕೊನೆಗೆ ಆತ್ಮಹತ್ಯೆಯ ನಿರ್ಧಾರ ಕೈಗೊಂಡು ಮರಣವನ್ನಪ್ಪಿದ್ದ. ಅದು ನಮಗೆ ಅತ್ಯಂತ ಅನಿರೀಕ್ಷಿತವಾದ ಘಟನೆ. ರಾತ್ರಿ ಎಂಟು ಗಂಟೆಯ ಹೊತ್ತಿಗೆ ನನ್ನ ಅಳಿಯ ತಂದಿದ್ದ ಸೈಕಲ್ಲೇರಿ ನಾನು ಮರಣೋತ್ತರ ಶವಪರೀಕ್ಷೆ ನಡೆಯುತ್ತಿದ್ದ ಸಿವಿಲ್ ಆಸ್ಪತ್ರೆಗೆ ಹೋಗುವಾಗ ಮಾರ್ಗಮಧ್ಯದಲ್ಲೇ APMC ಹತ್ತಿರ ಒಬ್ಬಂಟಿಯಾಗಿ ಬರುತ್ತಿದ್ದ ನನ್ನಪ್ಪ ಸಿಕ್ಕರು. ನನಗಾದಿದ್ದ ಶಾಕ್ ನನ್ನ ತಂದೆಯ ಮುಖಭಾವದಲ್ಲೂ ಇತ್ತೆ? ಗೊತ್ತಾಗಲಿಲ್ಲ. "ದವಾಖಾನ್ಯಾಗ ಅದೆಲ್ಲಾ ಮುಗೀಬೇಕಾದ್ರ ತಡಾ ಆಗ್ತೈತಿ. ನೀ ಒಂದ್ ಸ್ವಲ್ಪ ಏನರs ತಿಂದ ಚಾ ಕುಡೀವಂತೀ ನಡೀ" ಎಂದರು. ನನ್ನ ಪ್ರಶ್ನೆಗಳಿಗೆ ಚುಟುಕಾಗಿ ಉತ್ತರಿಸಿದರು. ಒಂದೆಡೆ ಸ್ವಲ್ಪ ಹೊತ್ತು ನಿಂತು ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ ಹೇಳಿದರು: "ಯಾವಾಗ ಬಸವ ಹಿಂಗಿಂಗ್ ಮಾಡಿಕೊಂಡಾನಂತ ಅವರ ಮಾವನ ಟೆಲಿಗ್ರಾಂ ಬಂದು ನನಗ ವಿಷಯ ತಿಳೀತೂ ಆವಾಗs ನಾ ಬಸವನ್ನ ಮರತ ಬಿಟ್ನಿ". ಮೂವರು ಹೆಣ್ಣುಮಕ್ಕಳ ನಂತರ ಹುಟ್ಟಿದ ತಮ್ಮ ಪ್ರೀತಿಯ ಪುತ್ರ, ಕುಟುಂಬದ ಹೆಮ್ಮೆಯ ಸದಸ್ಯ, ಯಾರ ಅಭ್ಯುದಯಕ್ಕಾಗಿ ಕುಟುಂಬದ ಎಲ್ಲರೂ ಹತ್ತಾರು ವರ್ಷ ಶ್ರಮಿಸಿದ್ದೆವೋ ಆ ಜೀವ ಹೀಗೆ ತನ್ನನ್ನು ಕೊನೆಗೊಳಿಸಿಕೊಂಡ ಬಗ್ಗೆ ನನ್ನ ತಂದೆಗೆ ದು:ಖ ಬೇಸರ ಇತ್ತೆ? ಇರಲಿಲ್ಲವೇ?
ಇದಾದ ಕೆಲ ದಿನಗಳ ನಂತರ ಬೈಲಹೊಂಗಲದ ನಮ್ಮ ಮನೆಯಲ್ಲಿ ಹಿತ್ತಿಲ ಕಡೆಯಿಂದ ನನ್ನ ತಂದೆಯನ್ನು ರಟ್ಟೆ ಹಿಡಿದು ನಡೆಸಿಕೊಂಡು ಬಂದ ನಮ್ಮ ಗೌರಕ್ಕ ನಡುಮನೆಯಲ್ಲಿದ್ದ ನನಗೆ ಹೇಳಿದಳು, "ಬಚ್ಚಲ ಕಟ್ಟೀ ಮ್ಯಾಲ ಕುಂತ ಅಪ್ಪಾ ಅಳಾಕ್ಹತ್ತಿದ್ದ." ಬಹಳ ಹೊತ್ತಿನ ನಂತರ ಅಪ್ಪ ನನಗೆ ವಿವರಣೆ ಕೊಡುವ ರೀತಿಯಲ್ಲಿ ಹೇಳಿದರು:"ಏನಿಲ್ಲ, ಆ ರೈಲಿನ ಗಾಲಿ ಬಸವನ ಶರೀರಾ ಜಗ್ಗಿಕೊಂಡ್ ಹಳೀಗುಂಟ ಓಡೂವಾಗ ಆ ಶರೀರಕ್ಕ ಎಷ್ಟ ಹಿಂಸಾ ಆಗಿದ್ದೀತು ಅಂತ ವಿಚಾರ ಬಂದು ಮನಸೀಗಿ ದು:ಖಾತು".
ಇಂಥ ನನ್ನ ತಂದೆ ಎಂಬತ್ತು ವರ್ಷ ವಯಸ್ಸಾಗುವ ವರೆಗೆ ಓಡಾಡಿಕೊಂಡೇ ಇದ್ದರು. ಆಮೇಲೆ ಕೀಲು ನೋವಿನಿಂದ ಮನೆಯಲ್ಲಿಯೇ ಇರುವ ಸ್ಥಿತಿ ಬಂತು. ಮೂತ್ರವಿಸರ್ಜನೆಯ ತೊಂದರೆ ಉಂಟಾದಾಗ ಎರಡು ಸಲ ಧಾರವಾಡದ ಡಾ.ರಾಮನಗೌಡರ್ ನರ್ಸಿಂಗ್ ಹೋಮ್ ಗೆ ಎಡ್ಮಿಟ್ ಮಾಡಿದೆವು. ವೈದ್ಯರ ಸೂಚನೆಯ ಮೇರೆಗೆ ನನ್ನ ತಮ್ಮ ಬೆಳಗಾವಿಯಿಂದ ಡಾ. ಅಚರೇಕರ್ ಎಂಬುವವರನ್ನು ಕರೆದುಕೊಂಡು ಬಂದನಾದರೂ ನನ್ನ ತಂದೆಯಲ್ಲಿ ಪಾರ್ಶ್ವವಾಯುವಿನ ಸೂಕ್ಷ್ಮ ಪರಿಣಾಮವನ್ನು ಗುರುತಿಸಿದ ವೈದ್ಯರು ಶಸ್ತ್ರಚಿಕಿತ್ಸೆಗೆ ಅವರ ದೇಹಸ್ಥಿತಿ ಪೂರಕವಾಗಿಲ್ಲವೆಂದು ತಿಳಿಸಿ ಕೆಥಟರೈಝೇಶನ್ ವ್ಯವಸ್ಥೆ ಮಾಡಿದರು. ಆ ವ್ಯವಸ್ಥೆಯಲ್ಲಿ ಇನ್ಫೆಕ್ಶನ್ ಆಗಿ ಜ್ವರ ಬರುವ ಸಾಧ್ಯತೆಗಳಿರುತ್ತಿದ್ದುದರಿಂದ ತಿಂಗಳಿಗೊಮ್ಮೆ ಬೈಲಹೊಂಗಲಕ್ಕೆ ಹೋಗಿ ಅಲ್ಲಿಯ ವೈದ್ಯರ ನೆರವಿನಿಂದ ಕೆಥೆಟರ್ ಬದಲಿಸಿ ಬರುತ್ತಿದ್ದೆವು. ಆಮೇಲಾಮೇಲೆ ಪೂರ್ತಿಯಾಗಿ ಹಾಸಿಗೆ ಹಿಡಿದ ತಂದೆ ಬೆಡ್ ಸೋರ್ ಗಳಾಗಿ ತಿಂಗಳೊಪ್ಪತ್ತು ತುಂಬ ಯಾತನೆ ಅನುಭವಿಸಿ ಕೊನೆಗೆ ೮ ಜೂನ್ ೧೯೯೫ರಲ್ಲಿ ನಿದ್ರೆಯಲ್ಲಿದ್ದಾಗಲೇ ಕೊನೆಯುಸಿರೆಳೆದರು. ಈ ನಡುವೆ ನನ್ನ ತಾಯಿಗೆ ಹೈಪೊಗ್ಲುಸೆಮಿಯಾ (ರಕ್ತದಲ್ಲಿ ಸಕ್ಕರೆ ಪ್ರಮಾಣದ ಇಳಿಕೆ) ಆಗಿ ಒಂದೆರಡು ಸಲ ತಾತ್ಕಾಲಿಕ ವಿಸ್ಮೃತಿ ಉಂಟಾಯಿತು. ನನ್ನ ತಂದೆ ತೀರಿಹೋದ ಎರಡೇ ವರ್ಷಗಳಲ್ಲಿ ೪ ಏಪ್ರಿಲ್ ೧೯೯೭ ರಲ್ಲಿ ನಮ್ಮ ತಾಯಿಯೂ ಅನಿರೀಕ್ಷಿತವಾಗಿ ಸೆರೆಬ್ರಲ್ ಹೆಮರೇಜ್ ನಿಂದ ನಮ್ಮೆಲ್ಲರ ಕಣ್ಮುಂದೆಯೇ ಕೊನೆಯುಸಿರೆಳೆದಳು.
ಬದುಕಿನ ಕೊನೆಯ ವರ್ಷಗಳಲ್ಲಿ ಅವರು ಸೌಕರ್ಯದಿಂದಿರುವಂತೆ ನಾನು ಮತ್ತು ನನ್ನ ತಮ್ಮ ಅರವತ್ತೆಪ್ಪತ್ತು ಸಾವಿರ ರೂಪಾಯಿ ಖರ್ಚು ಮಾಡಿ, ಹಳೆಯ ಮರಮುಟ್ಟುಗಳನ್ನೇ ಬಳಸಿ ಬೈಲಹೊಂಗಲದ ಮನೆಯನ್ನು ಪುನರ್ನಿರ್ಮಾಣ ಮಾಡಿಸಿದೆವು.ಪ್ರತಿ ತಿಂಗಳು ಅವರಿಗೆ ನಿಶ್ಚಿತ ಮೊತ್ತದ ಹಣವನ್ನು ನಮ್ಮ ಖಾತೆಗಳಿಂದ ವರ್ಗಾಯಿಸಲು ನಮ್ಮ ಬ್ಯಾಂಕಿನವರಿಗೆ ಸೂಚನೆ ಕೊಟ್ಟಿದ್ದೆವು. ಸ್ವಾತಂತ್ರ್ಯಯೋಧರಿಗೆ ಕೊಡಮಾಡುತ್ತಿದ್ದ ಹಣವೂ ಬರುತ್ತಿದ್ದು ಆರ್ಥಿಕ ತೊಂದರೆ ಇರಲಿಲ್ಲ. ಅವರಿಗೆ ಅಗತ್ಯದ ವೈದ್ಯಕೀಯ ಸೌಲಭ್ಯಗಳನ್ನೂ ಒದಗಿಸಿದೆವು. ಅವರ ಪಾರ್ಥಿವ ಶರೀರಗಳನ್ನೇನೋ ಬೀಳ್ಕೊಟ್ಟೆವು. ಅಂಥ ತಂದೆ-ತಾಯಿಯ ನೆನಪನ್ನು ಹೇಗೆ ಬೀಳ್ಕೊಟ್ಟೇವು? ಅವು ನಮ್ಮಲ್ಲಿ ಹಸಿರಾಗಿವೆ.

No comments:

Post a Comment